ಕೆರಾಟಿನ್‍ಗಳು

ಸ್ಕ್ಲೆರೋಪ್ರೋಟೀನ್ ವರ್ಗಕ್ಕೆ ಸೇರಿದ ಕೆಲವು ವಿಶಿಷ್ಟ ಅದ್ರಾವ್ಯ ಸಸಾರಜನಕಗಳ ಗುಂಪು. ಪ್ರಾಣಿಗಳ ಚರ್ಮ, ಕೂದಲು, ಉಗುರು, ಗೊರಸು, ಪಂಜ ಮತ್ತು ಉಣ್ಣೆಯಲ್ಲಿ ಕೆರಾಟಿನ್‍ಗಳಿರುತ್ತವೆ. ಸಾಮಾನ್ಯವಾಗಿ ಸಸಾರಜನಕಗಳು ಲೀನವಾಗುವ ದ್ರವಗಳಲ್ಲಿ ಇವು ಕರಗುವುದಿಲ್ಲ. ಪೆಪ್ಸಿನ್ ಮತ್ತು ಟ್ರಿಪ್ಸಿನ್ ಕಿಣ್ವಗಳು ಕೆರಾಟಿನ್‍ಗಳೊಡನೆ ವರ್ತಿಸಲಾರವು. ಮೇಲ್ಕಂಡ ಯಾವುದಾದರೂ ಕೆರಾಟಿನ್‍ಯುಕ್ತ ವಸ್ತುವನ್ನು ಆಲ್ಕೊಹಾಲ್ ಈಥರ್ ಮತ್ತು ನೀರಿನಿಂದ ಸಂಸ್ಕರಿಸಿದಾಗ ಸಸಾರಜನಕಗಳು ಲಭಿಸುವುವು. ಇವನ್ನು ಕಿಣ್ವಗಳ ನೆರವಿನಿಂದ ಜಲವಿಶ್ಲೇಷಣೆಗೊಳಿಸಿದರೆ ಕೆರಾಟಿನ್ ಮಾತ್ರ ಉಳಿಯುವುದು. ಜಲವಿಶ್ಲೇಷಣೆಗೆ ಪ್ರಬಲ ಆಮ್ಲವನ್ನು ಬಳಸಿದರೆ ಗಂಧಕಯುಕ್ತ ಅಮೈನೋ ಆಮ್ಲವಾದ ಸಿಸ್ಟೈನ್ ಅಧಿಕ ಪರಿಮಾಣದಲ್ಲಿ ದೊರೆಯುವುದು. ಅಂದರೆ ಕೆರಾಟಿನ್‍ಗಳ ಪ್ರಧಾನಾಂಶ ಸಿಸ್ಟೈನ್ ಎಂದಾಯಿತು. ಸೆರೈನ್ ಅರ್ಜಿನೈನ್ ಪ್ರೋಲೀನ್ ಮತ್ತು ಹೈಡ್ರಾಕ್ಸಿ ಪ್ರೋಲೀನ್ ಮುಂತಾದ ಅಮೈನೊ ಆಮ್ಲಗಳೂ ಇರುವುದುಂಟು.

ಭೌತಲಕ್ಷಣಗಳು, ಅಂಗಾಂಶ ಮತ್ತು ರಾಸಾಯನಿಕ ರಚನೆಗಳನ್ನು ಅವಲಂಬಿಸಿ ಗಡುಸು ಮತ್ತು ಮೆದು ಕೆರಾಟಿನ್‍ಗಳೆಂದು ಎರಡು ಸ್ಥೂಲ ವರ್ಗಗಳಾಗಿ ವಿಂಗಡಿಸುವುದು ವಾಡಿಕೆ. ಪ್ರಾಣಿಗಳ ಚರ್ಮದ ಹೊರಪೊರೆ ಮೆದು ಕೆರಾಟಿನ್‍ಗೂ ಕೊಂಬು ಉಗುರು ಗೊರಸು ಇತ್ಯಾದಿಗಳು ಗಡಸು ಕೆರಾಟಿನ್‍ಗೂ ಉದಾಹರಣೆಗಳು. ಮೆದು ಕೆರಾಟಿನ್‍ನಲ್ಲಿ ಸಿಸ್ಟೈನ್ ಪರಿಮಾಣ ಕಡಿಮೆ; ಮೆಥಯೊನೈನ್ ಪರಿಮಾಣ ಹೆಚ್ಚು.. ಪೋಷಣೆಗೆ ಅಗತ್ಯ ಎನಿಸಿಕೊಂಡಿರುವ ಅಮೈನೋ ಆಮ್ಲಗಳಾದ ಹಿಸ್ಟಿಡಿನ್ ಮೆಥಯೊನೈನ್ ಮತ್ತು ಟ್ರಿಪ್ಟೊಫ್ಯಾನ್‍ಗಳು ಅಲ್ಪಪರಿಮಾಣಗಳಲ್ಲಿ ಇರುವುದು ಗಡಸು ಕೆರಾಟಿನ್‍ಗಳ ವೈಶಿಷ್ಟ್ಯ.

ಕೆರಾಟಿನ್‍ಗಳ ರಚನಾ ವಿನ್ಯಾಸವನ್ನು ಕುರಿತು ಆಸ್ಟ್‍ಬರಿ ಎಂಬಾತ ವಿಶೇಷ ಅಧ್ಯಯನ ನಡೆಸಿದ್ದಾನೆ. ಎಕ್ಸ್ ಮತ್ತು ಅತಿರಕ್ತ ಕಿರಣಗಳನ್ನು ಬಳಸಿ ಪರೀಕ್ಷಿಸಿದಾಗ ಕೆರಾಟಿನ್‍ಗಳಲ್ಲಿ ಆಲ್ಫ ಮತ್ತು ಬೀಟ ರೂಪಗಳಿರುವುದು ವ್ಯಕ್ತವಾಗಿದೆ. ಬೀಟ ಕೆರಾಟಿನ್‍ನಲ್ಲಿ ನೇರ ಸರಣಿ (ಸ್ಟ್ರೇಟ್ ಚೇನ್) ರಚನೆಯೂ ಆಲ್ಫರೂಪದಲ್ಲಿ ನಿರಿಗೆ (ಫೋಲ್ಡೆಡ್) ವಿನ್ಯಾಸವೂ ಇರುವುವೆಂದು ಗೊತ್ತಾಗಿದೆ. ಇವನ್ನು ಕೆಳತೋರಿಸಿರುವಂತೆ ಚಿತ್ರಿಸಿಕೊಳ್ಳಬಹುದು.

ಚಿತ್ರ-1

ಚಿತ್ರ-2

ಹಬೆಯ ವರ್ತನೆಯಿಂದ ಆಲ್ಫ ಕೆರಾಟಿನ್ ಬೀಟರೂಪಕ್ಕೆ ಪರಿವರ್ತಿತವಾಗುವುದು. ಕೆರಾಟಿನ್‍ಗಳು ಅದ್ರಾವ್ಯ ವಸ್ತುಗಳಷ್ಟೆ. ಸಿಸ್ಟೈನ್ ಅಮೈನೋ ಆಮ್ಲದ ಅಣುಗಳು ಗಂಧಕದ ಪರಮಾಣುಗಳ ಮೂಲಕ ಹಾಸುಹೊಕ್ಕಾಗಿ ಹೆಣೆದುಕೊಂಡಿರುವುದೇ ಹೀಗಾಗಲು ಕಾರಣ. ಉತ್ಕರ್ಷಣ, ಅಪಕರ್ಷಣ ಅಥವಾ ಜಲವಿಶ್ಲೇಷಣೆ ಮೊದಲಾದ ಕ್ರಿಯೆಗಳಿಗೆ ಗುರಿಪಡಿಸಿದಾಗ ಈ ಜಟಿಲ ರಚನೆ ಶಿಥಿಲವಾಗುವುದು. ಲಭ್ಯವಸ್ತುಗಳು ಯೂರಿಯದ ಪ್ರಬಲ ದ್ರಾವಣ ದುರ್ಬಲ ದ್ರಾವಣ ಅಮೋನಿಯ ದ್ರಾವಣ ಮತ್ತು ಅನ್‍ಅಯಾನಿಕ್ ಮಾರ್ಜಕಗಳ ದ್ರಾವಣಗಳಲ್ಲಿ ಸರಾಗವಾಗಿ ಲೀನವಾಗುವುವು.  
									
	(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ